Chief Editor
Manohar. R (Manu)
Photo Journalist
chitrataramanu@gmail.com
+91 9845549026
ರವಿಕೆ ಪ್ರಸಂಗದೊಳಗಿನ ಅಂತರಂಗ ...ರೇಟಿಂಗ್ : 3.5/5 ****
Posted date: 16 Fri, Feb 2024 � 03:14:41 PM
 ಗ್ರಾಮೀಣ ಪ್ರದೇಶದ ಮುಗ್ಧ ಹೆಣ್ಣು ಮಗಳೊಬ್ಬಳ ಸುತ್ತ ಹೆಣೆಯಲಾದ ಸರಳ ಕಥೆ ರವಿಕೆ ಪ್ರಸಂಗ.  ಮದುವೆಯ ವಯಸ್ಸಿಗೆ ಬಂದ ಹೆಣ್ಣು ಮಗಳಿಗೆ ವರಾನ್ವೇಷಣೆ ಎಷ್ಟು ತ್ರಾಸದಾಯಕವಾಗಿರುತ್ತದೆ,  ಅಳತೆ ತಪ್ಪಾಗಿ ಹೊಲಿದ ಒಂದು ರವಿಕೆಯಿಂದ ಆದ ಪ್ರಮಾದ ಮುಂದೆ ಎಷ್ಟು ದೊಡ್ಡ ಮಟ್ಟದ ವಿವಾದಕ್ಕೆ  ದಾರಿ ಮಾಡಿಕೊಟ್ಟಿತು, ಕೊನೆಗದು  ಹೇಗೆ ಸುಖಾಂತ್ಯ ಆಯಿತು ಎನ್ನುವುದನ್ನು ತಿಳಿ ಹಾಸ್ಯದ ಮೂಲಕ ಜನರಿಗೆ  ತಲುಪಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸಂತೋಷ್ ಕೊಡಂಕೇರಿ.
 
ಮುಖ್ಯ ಭೂಮಿಕೆಯಲ್ಲಿ ಕಿರುತೆರೆ ಧಾರಾವಾಹಿ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಅಭಿನಯಿಸಿದ್ದಾರೆ. ಕಥೆ, ನಿರ್ದೇಶನ ಸಂತೋಷ್ ಕೊಡಂಕೇರಿಯವರದ್ದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಎಂಬ ಹಳ್ಳಿಯಲ್ಲಿ ಹುಟ್ಟಿದ ಕೂಡು ಕುಟುಂಬದ ಹೆಣ್ಣುಮಗಳು ಸಾನ್ವಿ(ಗೀತಾಭಾರತಿ ಭಟ್)ಗೆ ಗಂಡು ಹುಡುಕಿ  ಮದುವೆ ಮಾಡಿಸಲು ಪೋಷಕರು ನಡೆಸುವ  ಸತತ ಪ್ರಯತ್ನ, ಆಕೆ ತುಸು ದಪ್ಪಗಿದ್ದರಿಂದ ಸಂಬಂಧ ಕುದುರುತ್ತಿರಲ್ಲ. ನೋಡಲು ಬಂದ ಕೆಲವರನ್ನು ಸಾನ್ವಿಯೇ  ರಿಜೆಕ್ಟ್ ಮಾಡುವುದು, ಇದರ ನಡುವೆ  ಒಂದು ಪ್ರಯತ್ನದಲ್ಲಿ ಶ್ರೀಮಂತ ಸಂಬಂಧವೊಂದು ಬರುತ್ತದೆ. ಹೇಗಾದರೂ ಮಾಡಿ ಈ ಸಂಬಂಧವನ್ನು ಕುದುರಿಸಲೇಬೇಕೆಂದು ಮನೆಯವರೆಲ್ಲ ಸಿದ್ದತೆ ಮಾಡಿಕೊಳ್ಳುತ್ತಾರೆ. ಮಗಳು ಸುಂದರವಾಗಿ ಅಲಂಕೃತಳಾಗಬೇಕೆಂದು ತಾಯಿ ಕೊಟ್ಟ ಸೀರೆಗೆ ಅಂದದ ರವಿಕೆ ಹೊಲಿಸಿಕೊಳ್ಳಲು ಮೊಬೈಲ್ ನಲ್ಲಿ  ಹೊಸ ಡಿಸೈನ್  ಹುಡುಕಿದ ಸಾನ್ವಿ, ಟೈಲರ್  ಚಂದ್ರ(ಸಂಪತ್)ನ ಅಂಗಡಿಗೆ ಬಂದು ಇದೇ ರೀತಿಯ ರವಿಕೆ ಹೊಲಿದುಕೊಡಲು ಹೇಳುತ್ತಾಳೆ.
 
ಸಾಧಾರಣ ರವಿಕೆ  ಹೊಲಿದು ರೂಢಿಯಾಗಿದ್ದ ಟೈಲರ್ ಚಂದ್ರನಿಗೆ ಆ ಹೊಸ ಡಿಸೈನ್ ರವಿಕೆ ಹೊಲಿಯೋದು ತ್ರಾಸದಾಯಕವಾಯಿತು. ಇಲ್ಲಿಂದ ಕಥೆ ಒಂದೊಂದೇ  ತಿರುವು ಪಡೆಯುತ್ತಾ ಸಾಗುತ್ತದೆ. ಮದುವೆಯಾಗುವ ಕನಸು ಹೊತ್ತ ಸಾನ್ವಿ ದಪ್ಪ ಕರಗಿಸಿಕೊಂಡು  ಸುಂದರವಾಗಿ ಕಾಣಬೇಕೆಂಬ ಹಪಹಪಿಯಲ್ಲಿ ಜಿಮ್, ಯೋಗ, ಡಯಟ್ ಪ್ರಾರಂಭಿಸಿ ಸೋತುಹೋಗುತ್ತಾಳೆ. ಈ ಸಂದರ್ಭದಲ್ಲಿ ಸಪೂರ  ಆಗುತ್ತೇನೆಂಬ ಭರವಸೆಯಿಂದ ಟೈಲರ್ ಗೆ ಅಳತೆ ಕಡಿಮೆಗೊಳಿಸಿ ಎಂದು ಹೇಳಿದ ಮಾತು ಮಾತಾಗೇ ಉಳಿದುಬಿಡುತ್ತದೆ. ಇಲ್ಲಿಂದ ಕಥೆ ಪೊಲೀಸ್ ಠಾಣೆ, ಸಾಮಾಜಿಕ ಜಾಲತಾಣ ಕೊನೆಗೆ ಕೋರ್ಟ್ ಮೆಟ್ಟಿಲೇರುವತನಕ ಹೋಗುತ್ತದೆ.
 
ಇಲ್ಲದ ರಾದ್ದಾಂತ ಸೃಷ್ಟಿಸಿ, ಒಂದು ಹಂತದಲ್ಲಿ ಆ ಮ್ಯಾಟರ್  ನ್ಯಾಷನಲ್ ಇಷ್ಯೂ ಆಗಿಬಿಡುತ್ತದೆ‌.  ಚಿತ್ರದ ಕ್ಲೈಮ್ಯಾಕ್ಸ್ ಭಾಗದಲ್ಲಿ  ಸೂಕ್ಷ್ಮ ವಿಚಾರಗಳಿಂದ ಸಂಬಂಧಗಳು ಹೇಗೆ ಸಡಿಲಗೊಳ್ಳುತ್ತದೆ ಎಂಬ ಜೀವನದ ಮೌಲ್ಯವನ್ನು ಪ್ರೇಕ್ಷಕರಿಗೆ ಅರ್ಥೈಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಯಕ್ಷಗಾನ ಕಲಾವಿದ ಹಾಗೂ  ಟೈಲರ್ ಚಂದ್ರನ ಪಾತ್ರಕ್ಕೆ  ಸಂಪತ್ ಜೀವ ತುಂಬಿದ್ದಾರೆ. ದಕ್ಷಿಣ ಕನ್ನಡ ಭಾಗದ  ಹಳ್ಳಿಗರ ದಿನನಿತ್ಯದ  ಜೀವನಶೈಲಿ, ಆಟೋಟ ಇತ್ಯಾದಿಗಳ ಬಗ್ಗೆ ಸ್ಥಳೀಯ ಭಾಷೆಯ ಸೊಗಡನ್ನು  ಇಟ್ಟುಕೊಂಡು ಕಥೆಗಾರ್ತಿ ಪಾವನಾ ಸಂತೋಷ್ ಸುಂದರ ಕಥೆ ಹೆಣೆದಿದ್ದಾರೆ‌. ನಟಿ ಪದ್ಮಜಾರಾವ್ ಹೆಣ್ಣು ಹೆತ್ತವರ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕ ಚಿಕ್ಕ ವಿಚಾರ, ತಪ್ಪುಮಾಹಿತಿಗಳು ಜಾಲತಾಣಗಳ ಮೂಲಕ ಹಳ್ಳಿಯಿಂದ ದಿಲ್ಲಿಗೆ ಎಷ್ಟು ವೇಗವಾಗಿ ಹರಡುತ್ತದೆ ಎಂಬುದನ್ನು ತುಂಬಾ ಪರಿಣಾಮಕಾರಿವಾಗಿ  ಚಿತ್ರದಲ್ಲಿ ಸೆರೆಹಿಡಿದಿದ್ದಾರೆ.
 
ಕರಾವಳಿ ಜನರ ಜೀವನದ ಸಾಂಸ್ಕೃತಿಕ ಭಾಗ ಯಕ್ಷಗಾನ, ಆಹಾರ ಭಾಗವಾಗಿ ಮೀನು ಬೇಟೆ, ಓಡಾಟಕ್ಕೆ ಆಟೋರಿಕ್ಷಾ, ಒಂದೇ ಅಂಗಡಿ, ಒಂದು ಠಾಣೆ ಹೀಗೆ ದಿನನಿತ್ಯ ಹುಟ್ಟಿನಿಂದಲೇ ಪರಸ್ಪರ ಸಹಕರಿಸುತ್ತಾ ಬಾಳುವೆ ನಡೆಸುವ ಜನರ ಜೀವನದ ಕಥೆಯನ್ನು ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ರವಿಕೆ ಪ್ರಸಂಗದಲ್ಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರವಿಕೆ ಪ್ರಸಂಗದೊಳಗಿನ ಅಂತರಂಗ ...ರೇಟಿಂಗ್ : 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.